ಅನುದಿನ

UPDATE NEWS

                                     
          
                                         ಮೇ  19 2024
 
   

ಲೋಕಸಭೆ ಚುನಾವಣೆ
5ನೇ ಹಂತದ ಮತದಾನ
ಬಹಿರಂಗ ಪ್ರಚಾರ ಅಂತ್ಯ

ನವದೆಹಲಿ ಮೇ 18 ಪಿಟಿಐ:ಬಿಜೆಪಿ ಮತ್ತು ‘ಇಂಡಿಯಾ’ ಒಕ್ಕೂಟದ ಅಬ್ಬರದ ಘೋಷಣೆ, ವಾಗ್ದಾಳಿಗಳ ನಡುವೆಯೇ 5ನೇ ಹಂತದ ಮತದಾನದ ಬಹಿರಂಗ ಪ್ರಚಾರ ಶನಿವಾರ ಅಂತ್ಯಗೊಂಡಿದೆ. ಈ ಹಂತದಲ್ಲಿ ಸೋಮವಾರ ಎಂಟು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳ ಚುನಾವಣೆ ನಡೆಯಲಿದೆ. 
ಐದನೇ ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಯ್‌ಬರೇಲಿ), ಬಿಜೆಪಿಯ ಸ್ಮೃತಿ ಇರಾನಿ (ಅಮೇಠಿ), ಕೇಂದ್ರ ಸಚಿವರಾದ ರಾಜನಾಥ ಸಿಂಗ್ (ಲಖನೌ), ಪೀಯೂಷ್ ಗೋಯಲ್ (ಮುಂಬೈ ಉತ್ತರ), ಒಮರ್ ಅಬ್ದುಲ್ಲಾ (ಬಾರಾಮುಲ್ಲಾ) ಮತ್ತು ಆರ್‌ಜೆಡಿಯ ರೋಹಿಣಿ ಆಚಾರ್ಯ ಅವರಂತಹ ಪ್ರತಿಷ್ಠಿತರ ಕ್ಷೇತ್ರಗಳಲ್ಲಿ ಮತದಾನವು ನಡೆಯಲಿದೆ.                  

2019ರ ಲೋಕಸಭಾ ಚುನಾವಣೆಯಲ್ಲಿ ಈ 49 ಕ್ಷೇತ್ರಗಳ ಪೈಕಿ 32ರಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ರಾಯ್‌ಬರೇಲಿಯಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ’ಇಂಡಿಯಾ’ ಕೂಟವು ಕೇವಲ 6 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಡಿ ಎರಡು ಹಾಗೂ ಎನ್‌ಡಿಎ 41 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಈ ಬಾರಿ, ಬಿಜೆಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಕೇವಲ 18 ಕ್ಷೇತ್ರಗಳಲ್ಲಿ ಅಖಾಡಕ್ಕಿಳಿದಿದೆ. ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಬಿಹಾರದ ಉಳಿದ ಕ್ಷೇತ್ರಗಳನ್ನು ‘ಇಂಡಿಯಾ’ ಕೂಟದ ತನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ನೀತಿ ಸಂಹಿತೆ ಸಡಿಸಲಿಸಿದ
ಚುನಾವಣಾ ಆಯೋಗ

ಬೆಂಗಳೂರು ಮೇ 18 ಅನುದಿನ : ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟದ ಎಲ್ಲ ಸಚಿವರು ಬರ, ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಪರಾಮರ್ಶನ ಸಭೆ ನಡೆಸಲು ಭಾರತೀಯ ಚುನಾವಣಾ ಆಯೋಗವು ಶರತ್ತುಬದ್ಧವಾಗಿ ಚುನಾವಣಾ ಮಾದರಿ ನೀತಿಸಹಿತೆಯನ್ನು ಸಡಿಲಿಸಿದೆ.
ರಾಜ್ಯದಲ್ಲಿನ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ತಾಲೂಕುಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಬರ ಪರಿಹಾರ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರ ಜೊತೆ ವಿಡಿಯೋ ಕಾನ್ಫರೆನ್ಸ್, ಪರಿಶೀಲನಾ ಸಭೆಗಳನ್ನು ನಡೆಸಬೇಕಿದೆ. ಆದುದರಿಂದ, ಮಾದರಿ ನೀತಿ ಸಂಹಿತೆಯನ್ನು ಸಡಿಲಗೊಳಿಸುವಂತೆ ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು.
ಅದೇ ರೀತಿ, ಸರಕಾರದ ವಿವಿಧ ನಿಗಮಗಳು, ಮಂಡಳಿಗಳು, ಸಮಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಇತರೆ ಶಾಸನಾತ್ಮಕ ಸಂಸ್ಥೆಗಳಲ್ಲಿ ಸಭೆಗಳನ್ನು ನಡೆಸಲು ಸಕ್ಷಮ ಪ್ರಾಧಿಕಾರಗಳು ಚುನಾವಣಾ ಆಯೋಗದ ನಿರ್ಣಯದಲ್ಲಿನ ಷರತ್ತಿಗೊಳಪಟ್ಟು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮೂಲಭೂತ ಸೌಲಭ್ಯ ಕಾಮಗಾರಿಗಳು ಮತ್ತು ಸರಕು ಸೇವೆಗಳ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಗಳನ್ನು ಆಹ್ವಾನಿಸುವುದು, ಟೆಂಡರ್ ಗಳನ್ನು ಅಂತಿಮಗೊಳಿಸುವುದು ಹಾಗೂ ಕಾರ್ಯಾದೇಶಗಳನ್ನು ನೀಡುವ ಕುರಿತ ಪ್ರಸ್ತಾವನೆಗಳಿಗೆ ಸಕ್ಷಮ ಪ್ರಾಧಿಕಾರಿಗಳು ಚುನಾವಣಾ ಆಯೋಗದ ನಿರ್ಣಯದಲ್ಲಿನ ಷರತ್ತಿಗೊಳಪಟ್ಟು ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.

ಪ್ರಜ್ವಲ್ ಬ್ಯಾಂಕ್
ವಹಿವಾಟು ಸ್ಥಗಿತಕ್ಕೆ
ಎಸ್‌ಐಟಿ ಕ್ರಮ!!

ಬೆಂಗಳೂರು ಮೇ 18 ಅನುದಿನ:ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್‌ ಖಾತೆಗಳ ವಿವರ ಸಂಗ್ರಹಿಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಎಲ್ಲ ಖಾತೆಗಳ ವಹಿವಾಟು ಸ್ಥಗಿತಗೊಳಿಸಲು ಪ್ರಕ್ರಿಯೆ ಆರಂಭಿಸಿರುವುದಾಗಿ ಗೊತ್ತಾಗಿದೆ.
ಹಾಸನ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ದೇಶ ತೊರೆದಿರುವ ಪ್ರಜ್ವಲ್, ಜರ್ಮನಿಗೆ ತೆರಳಿದ್ದರೆಂಬ ಮಾಹಿತಿ ಇತ್ತು. ಇದೀಗ, ಅವರು ಲಂಡನ್‌ನಲ್ಲಿರುವ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿದೆ.

‘ರಾಜ್ಯಕ್ಕೆ ವಾಪಸು ಬರಲು ಪ್ರಜ್ವಲ್‌ ಎರಡು ಬಾರಿ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಆದರೆ, ಬಂಧನದ ಭೀತಿಯಿಂದಾಗಿ ಅವರು ಟಿಕೆಟ್ ರದ್ದುಪಡಿಸಿದ್ದರು. ಪ್ರಜ್ವಲ್ ವಿರುದ್ಧ ಈಗಾಗಲೇ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್‌ಪೋಲ್ ಅಧಿಕಾರಿಗಳು ಪ್ರಜ್ವಲ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದೇ ಮಾಹಿತಿ ಆಧರಿಸಿ ತನಿಖೆಯೂ ಮುಂದುವರಿದಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಪ್ರಜ್ವಲ್ ತಮ್ಮ ಬ್ಯಾಂಕ್ ಖಾತೆಗಳಿಂದ ವಹಿವಾಟು ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದರೆ, ಹಣಕ್ಕಾಗಿ ಅವರು ಆಪ್ತರನ್ನು ಸಂಪರ್ಕಿಸುವ ಸಾಧ್ಯತೆ ಇರುತ್ತದೆ. ಆಗ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವು ಸಿಗಬಹುದು ಎಂಬ ನಿರೀಕ್ಷೆ ಇದೆ. ಪ್ರಜ್ವಲ್‌ಗೆ ಸಂಬಂಧಪಟ್ಟ ಎಲ್ಲ ಬ್ಯಾಂಕ್ ಖಾತೆಗಳ ವಿವರ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿವೆ.

ಪ್ರಜ್ವಲ್ ರೇವಣ್ಣ ಬಂಧನಕ್ಕೆ ವಾರಂಟ್:ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕಾಗಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ವಾರಂಟ್ ಜಾರಿ ಮಾಡಿದೆ.

ಪೆನ್‌ಡ್ರೈವ್ ವಿಡಿಯೊಗಳು ಹರಿದಾಡುತ್ತಿದ್ದಂತೆ ತಲೆಮರೆಸಿಕೊಂಡಿರುವ ಪ್ರಜ್ವಲ್, ವಿದೇಶದಲ್ಲಿರುವ ಮಾಹಿತಿ ಇದೆ. ಅವರನ್ನು ಬಂಧಿಸಲು ವಾರಂಟ್ ಜಾರಿ ಮಾಡುವಂತೆ ಕೋರಿ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.ಮನವಿ ಪುರಸ್ಕರಿಸಿದ ನ್ಯಾಯಾಲಯ, ಪ್ರಜ್ವಲ್ ಬಂಧನಕ್ಕಾಗಿ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.

ನೇಹಾ ಹತ್ಯೆ:
ಸದ್ಯದಲ್ಲೇ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು ಮೇ 18 ಅನುದಿನ:ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ (23) ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಆರೋಪಿ ಫಯಾಜ್‌ ಬಾಬಾಸಾಹೇಬ ಖೊಂಡಾನಾಯಕ್‌ ವಿರುದ್ಧ ನ್ಯಾಯಾಲಯಕ್ಕೆ ಸದ್ಯದಲ್ಲೇ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವ ಸಾಧ್ಯತೆ ಇದೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಅವರನ್ನು ಏಪ್ರಿಲ್ 18ರಂದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆರೋಪಿ ಫಯಾಜ್‌ನನ್ನು ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಬಂಧಿಸಿದ್ದರು. ತನಿಖೆ ಜವಾಬ್ದಾರಿ ವಹಿಸಿಕೊಂಡಿದ್ದ ಸಿಐಡಿ ಅಧಿಕಾರಿಗಳು, ಆರೋಪಿ ಫಯಾಜ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು.

‘ನೇಹಾ ಹಿರೇಮಠ ಕೊಲೆಗೆ ಸಂಬಂಧಪಟ್ಟಂತೆ ಎಲ್ಲ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ದೋಷಾರೋಪ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವರ ಹೇಳಿಕೆ ದಾಖಲು: ನೇಹಾ ಅವರ ಪೋಷಕರು, ಸಹಪಾಠಿಗಳು, ಸ್ನೇಹಿತರು, ಆರೋಪಿ ಹಾಗೂ ಆತನ ಕುಟುಂಬದವರು ಸೇರಿದಂತೆ ಹಲವರ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಜೊತೆಗೆ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕೃತ್ಯಕ್ಕೆ ಸಂಬಂಧಪಟ್ಟ ಎಲ್ಲ ಸಂಗತಿಗಳನ್ನು ದೋಷಾರೋಪ ಪಟ್ಟಿ ಜೊತೆಯಲ್ಲಿ ಲಗತ್ತಿಸಲಿದ್ದಾರೆ

ಪ್ರಜ್ವಲ್ ತಪ್ಪು ಮಾಡಿದ್ದರೆ
ಕಾನೂನು ಪ್ರಕಾರ ಕ್ರಮ ಜರುಗಿಸಲಿ

ಬೆಂಗಳೂರು ಮೇ 18 ಅನುದಿನಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಪ್ಪು ಮಾಡಿರುವುದು ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ತಮ್ಮ 92ನೇ ಜನ್ಮ‌ದಿನವಾದ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಮೊಮ್ಮಗ ಪ್ರಜ್ವಲ್ ರೇವಣ್ಣ ಮತ್ತು ಮಗ ಎಚ್.ಡಿ. ರೇವಣ್ಣ ವಿರುದ್ಧದ ಆರೋಪಗಳ ಕುರಿತು ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.'ಪ್ರಜ್ವಲ್ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಆತ ತಪ್ಪು ಮಾಡಿದ್ದಾನೆ ಎಂದು ತನಿಖೆಯಲ್ಲಿ ಸಾಬೀತಾದರೆ ಸರ್ಕಾರ ಕ್ರಮ ಜರುಗಿಸಲಿ' ಎಂದರು.

'ಎಚ್.ಡಿ.‌ರೇವಣ್ಣ ವಿರುದ್ಧದ ಪ್ರಕರಣವನ್ನು ಸೃಷ್ಟಿಸಲಾಗಿದೆ. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಈಗ‌ ಮಾತನಾಡುವುದಿಲ್ಲ. ಒಂದು ಪ್ರಕರಣದಲ್ಲಿ ರೇವಣ್ಣ ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮತ್ತೊಂದು ಪ್ರಕರಣದಲ್ಲಿ ಜಾಮೀನು ಅರ್ಜಿಯ ವಿಚಾರಣೆ ಪ್ರಗತಿಯಲ್ಲಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಹಲವರಿದ್ದಾರೆ. ಎಲ್ಲರಿಗೂ ಶಿಕ್ಷೆ ಆಗಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಬೇಕು' ಆ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದರು.

'ಈ ಪ್ರಕರಣದ ಹಿಂದೆ ಯಾರಿದ್ದಾರೆ? ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೇವೆ? ಎಂಬುದರ ಕುರಿತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾರೆ. ಅವರು ಈಗಾಗಲೇ ಮಾತನಾಡಿದ್ದಾರೆ. ಮುಂದೆಯೂ ಅವರೇ ಸ್ಪಷ್ಟ ನಿಲುವನ್ನು ಪ್ರಕಟಿಸುತ್ತಾರೆ' ಎಂದು ತಿಳಿಸಿದರು.

ಪ್ರಜ್ವಲ್ ಪ್ರಕರಣದ ಪೆನ್ ಡ್ರೈವ್ ವಿತರಣೆ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ದೇವೇಗೌಡ, 'ಮಾಧ್ಯಮಗಳ ಮೂಲಕ ಈ ಕುರಿತು ತಿಳಿಯಿತು. ಆ ಬಗ್ಗೆಯೂ ಕುಮಾರಸ್ವಾಮಿ ಅವರೇ ಹೇಳುತ್ತಾರೆ. ಮುಂದಿನ ನಡೆಯ ಕುರಿತು ಅವರೇ ಪ್ರಕಟಿಸುತ್ತಾರೆ' ಎಂದರು.

'ನಾನು ಲೋಕಸಭಾ ಚುನಾವಣೆಯಲ್ಲಿ ಪ್ರಚಾ ರ‌ಮಾಡಿದ್ದೇನೆ. ಜೂನ್ 4ರ ನಂತರ ನಿಮ್ಮನ್ನು ಭೇಟಿಯಾಗುವೆ' ಎಂದ ಅವರು, ತಮ್ಮ ಮನೆಯ ಬಳಿಯಿಂದ‌ ನಿರ್ಗಮಿಸುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ‌ ಮಾಡಿದರು

ರಾಜ್ಯದಲ್ಲಿ
ಅಪರಾಧ ಪ್ರಕರಣ ಹೆಚ್ಚಾಗಿಲ್ಲ

ತುಮಕೂರು ಮೇ 18 ಅನುದಿನ:ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಎಲ್ಲವನ್ನೂ ನಿಯಂತ್ರಣದಲ್ಲೇ ಇಟ್ಟಿದ್ದೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾನೂನು, ಸುವ್ಯವಸ್ಥೆ ನಿಯಂತ್ರಣದಲ್ಲಿ ಇದೆ. ಬಿಜೆಪಿಯವರನ್ನು ಕೇಳಿಕೊಂಡು ಕಾನೂನು ಪಾಲನೆ ಮಾಡುತ್ತಿಲ್ಲ. ಕಾನೂನು, ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿಯವರು ಎಷ್ಟೇ ಪ್ರಯತ್ನ ಮಾಡಿದರೂ ಅದನ್ನು ನಿಯಂತ್ರಣ ಮಾಡುವ ಶಕ್ತಿ ಸರ್ಕಾರಕ್ಕಿದೆ. ಜನರ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ’ ಎಂದರು.

ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ನಾಲ್ಕು ತಿಂಗಳ ವರದಿ ಇಟ್ಟುಕೊಂಡು ವಿಶ್ಲೇಷಣೆ ಮಾಡಲಾಗದು. ಒಂದೊಂದು ಘಟನೆಗೂ ಪ್ರತ್ಯೇಕ ಕಾರಣಗಳು ಇರುತ್ತವೆ’ ಎಂದು ಹೇಳಿದರು.

‘ಬಿಜೆಪಿಯವರ ಆಡಳಿತದಲ್ಲಿ ಎಷ್ಟು ಕೊಲೆಗಳು ನಡೆದಿದ್ದವು. ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ನಡೆದಿವೆ ಎಂಬ ಅಂಕಿ ಸಂಖ್ಯೆ ಬಿಡುಗಡೆ ಮಾಡಲಾಗುವುದು. ಆಗ ಯಾರ ಅವಧಿಯಲ್ಲಿ ಹೆಚ್ಚು ಕೊಲೆಗಳು ನಡೆದಿದ್ದವು ಎಂಬುದು ಜನರಿಗೆ ಗೊತ್ತಾಗುತ್ತದೆ’ ಎಂದು ತಿಳಿಸಿದರು.

ಅಂಜಲಿ‌ ಕುಟುಂಬಕ್ಕೆ
ಸಚಿವ ಲಾಡ್ ಆರ್ಥಿಕ ನೆರವು

ಹುಬ್ಬಳ್ಳಿ ಮೇ 18 ಅನುದಿನ:ಈಚೆಗೆ ಕೊಲೆಯಾದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಅವರ‌ ಮನೆಗೆ ಜಿಲ್ಲಾ‌ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶನಿವಾರ ಭೇಟಿ‌ ನೀಡಿ ಕುಟುಂಬದವರಿಗೆ ಸಾಂತ್ವನ‌ ಹೇಳಿದರು.
ಅಂಜಲಿ ಅವರ ಅಜ್ಜಿ‌ ಗಂಗಮ್ಮ ಮತ್ತು ಸಹೋದರಿಯರಿಗೆ ಧೈರ್ಯ ಹೇಳಿದ ಲಾಡ್, ಸಂತೋಷ್ ಲಾಡ್ ಫೌಂಡೇಷನ್‌ನಿಂದ ₹2 ಲಕ್ಷ ಚೆಕ್ ನೀಡಿದರು.

ಲಾಡ್ ಭೇಟಿಗೆ ವಿರೋಧ: ಅಂಜಲಿ ಮನೆಗೆ ಭೇಟಿ ನೀಡಿದ‌ ಸಚಿವ ಸಂತೋಷ್ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಬಿಜೆಪಿ ಮುಖಂಡ ಅನೂಪ್‌ ಬಿಜವಾಡ ಸೇರಿದಂತೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.ಕೊಲೆಯಾಗಿ ಮೂರು ದಿನ ಆಗಿದೆ. ಇಷ್ಟು ದಿನ ಎಲ್ಲಿ ಹೋಗಿದ್ದಿರಿ. ಈಗ ಏಕೆ‌ ಬಂದಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಸ್ತರಣೆಗೆ ಕಟ್ಟಡ ತೆರವು

ಬಳ್ಳಾರಿ ಮೇ 18 ಅನುದಿನ: ಬಳ್ಳಾರಿ ನಗರದ 21ನೇ ವಾರ್ಡ್ ವ್ಯಾಪ್ತಿಯ ಮೋಕ ರಸ್ತೆಯ ಕೆಇಬಿ ಸರ್ಕಲ್‌ನಿಂದ ಶಬರಿ ಹೋಟೆಲ್ ಬಳಿಯ ಮೇಲ್ಸೇತುವೆವರೆಗೆ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಶನಿವಾರ ಬೆಳಗ್ಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
‘ರಸ್ತೆ ನಿರ್ಮಾಣಕ್ಕೆ ಸುಮಾರು ರೂ3.90 ಕೋಟಿ ಅನುದಾನ ಮೀಸಲಿಡಲಾಗಿದೆ. ಸುಮಾರು 100 ರಸ್ತೆಯ ನಿರ್ಮಾಣ ಮಾಡಲಾಗುತ್ತಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಒತ್ತುವರಿ ತೆರವು, ರಸ್ತೆ ವಿಸ್ತರಣೆ ಅನಿವಾರ್ಯ. ಇದರಿಂದ ಸ್ಥಳೀಯ ನಿವಾಸಿಗಳೂ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ. ಸಿರಿವಾರ-ಚಾಗನೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಸದರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಲಿದೆ. ಹೀಗಾಗಿ ಈ ರಸ್ತೆಯ ವಿಸ್ತರಣೆ ಹಾಗೂ ಅಭಿವೃದ್ಧಿ ಅನಿವಾರ್ಯ’ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

...........................................................................

ANUDINA Kannada News Website.
for latest news and reports, insightful analyses,
on politics, policy, governance,
Founder /Editor-in-Chief:Ganesh Inamdar.Journalist.Karnataka.
Founded-JUL/1/2016.Contacts: 9886667478
E-mail: ptiganesh.bly@gmail.com 

Today, there have been 30 visitors (35 hits) on this page!
This website was created for free with Own-Free-Website.com. Would you also like to have your own website?
Sign up for free