PHOTO page
     ABOUT ANUDINA
     UPDATE NEWS
     BALLARI NEWS
     GANESH INAMDAR


ಅನುದಿನ


ಅನುದಿನ - UPDATE NEWS


                                     
          
                                            ಮೇ  8 2024
 
   

ಲೋಕಸಭೆ ಚುನಾವಣೆ
3ನೇ ಹಂತ, ಶೇ 65ರಷ್ಟು ಮತದಾನ

ನವದೆಹಲಿ ಮೇ 7 ಪಿಟಿಐ: ಮೂರನೇ ಹಂತದಲ್ಲಿ 11 ರಾಜ್ಯಗಳಲ್ಲಿ, ಲೋಕಸಭೆಯ 93 ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ 65ರಷ್ಟು ಮತದಾನವಾಗಿದೆ. ಈ ಮೂಲಕ ಲೋಕಸಭೆಯ ಶೇ 50ರಷ್ಟು ಅಂದರೆ 283 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಂತಾಗಿದೆ.
ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಜ್ಯೋತಿರಾದಿತ್ಯ ಸಿಂಧಿಯಾ ಸೇರಿ ಒಟ್ಟು 1,331 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು.ಪಶ್ಚಿಮ ಬಂಗಾಳದಲ್ಲಿ ಅಲ್ಪಪ್ರಮಾಣದ ಹಿಂಸಾಚಾರ ಘಟನೆಗಳು ನಡೆದಿದರೆ, ರಸ್ತೆ ಅಭಿವೃದ್ಧಿಪಡಿಸದ ಧೋರಣೆಯನ್ನು ಪ್ರತಿಭಟಿಸಿ ಉತ್ತರ ಪ್ರದೇಶದ ಮೂರು ಗ್ರಾಮಗಳಲ್ಲಿ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದರು.

ಮೂರನೇ ಹಂತದ ಮತದಾನದ ವೇಳೆ, ದೇಶದಲ್ಲಿನ ಚುನಾವಣಾ ವ್ಯವಸ್ಥೆಯನ್ನು ವೀಕ್ಷಿಸಲು 23 ವಿವಿಧ ರಾಷ್ಟ್ರಗಳ 75 ಪ್ರಮುಖರು ಆರು ರಾಜ್ಯಗಳಲ್ಲಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಮತಯಂತ್ರ ಹಂಚಿಕೆ, ಸಿಬ್ಬಂದಿ ನಿಯೋಜನೆ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಕೇಂದ್ರ ಚುನಾವಣಾ ಆಯೋಗದ ಪ್ರಾಥಮಿಕ ಮಾಹಿತಿ ಪ್ರಕಾರ ರಾತ್ರಿ 8.30ರ ವೇಳೆಗೆ ಶೇ 61.73ರಷ್ಟು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ ಶೇ 68.4ರಷ್ಟು ಮತದಾನವಾಗಿತ್ತು.

ಮೋದಿ ಮತದಾನ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬಳಿಕ ‘ಎಕ್ಸ್’ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದು, ‘ಜನರು ದಾಖಲೆ ಸಂಖ್ಯೆಯಲ್ಲಿ ಬಂದು ಮತ ಹಕ್ಕು ಚಲಾಯಿಸಬೇಕು. ಸಕ್ರಿಯ ಪಾಲುದಾರಿಕೆಯು ಚುನಾವಣೆಯನ್ನು ಇನ್ನಷ್ಟು ಆಕರ್ಷಕಗೊಳಿಸಲಿದೆ’ ಎಂದು ಮನವಿ ಮಾಡಿದರು.

ಹಿಂಸಾಚಾರ: ಪಶ್ಚಿಮ ಬಂಗಾಳದ ಮುರ್ಶಿರಾಬಾದ್‌, ಜಾಂಗಿಪುರ ಕ್ಷೇತ್ರದಲ್ಲಿ ಹಿಂಸಾಚಾರ ಘಟನೆಗಳು ನಡೆದಿವೆ. ನಮ್ಮ ಮತದಾರರು ಮತಗಟ್ಟೆಗೆ ಬಾರದಂತೆ ಬಿಜೆಪಿ ಕಾರ್ಯಕರ್ತರು, ಪೊಲೀಸರು ತಡೆದಿದ್ದಾರೆ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ದೂರಿದರು.

ಉತ್ತರ ಪ್ರದೇಶದ ಧೋರನ್‌ಪುರ್‌ನಲ್ಲಿ ರಸ್ತೆ ನಿರ್ಮಿಸದ ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಫಿರೋಜಾಬಾದ್‌ ಜಿಲ್ಲೆಯ ನಾಗ್ಲಾ ಜವಾಹರ್, ನೀಮ್ ಖೇರಿಯಾ, ನಾಗ್ಲಾ ಉಮರ್ ಗ್ರಾಮಗಳಲ್ಲಿ ಜನರು ಮತದಾನ ಬಹಿಷ್ಕರಿಸಿದರು. ಮಹಾರಾಷ್ಟ್ರದಲ್ಲಿ ಪವಾರ್ ಕುಟುಂಬದ ಪ್ರತಿಷ್ಠೆಯ ಕಣವಾಗಿದ್ದ ಬಾರಾಮತಿ ಕ್ಷೇತ್ರದಲ್ಲಿ ಕನಿಷ್ಠ ಅಂದರೆ ಶೇ 47.84ರಷ್ಟು ಮತದಾನವಾಗಿದೆ. ಇಲ್ಲಿ ಸಂಸದೆ ಸುಪ್ರಿಯಾ ಸುಳೆ ವಿರುದ್ಧ, ಅಜಿತ್‌ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಸ್ಪರ್ಧಿಸಿದ್ದಾರೆ.

ಕೇಜ್ರಿವಾಲ್‌ಗೆ ಜಾಮೀನು
ಆದೇಶ ಕಾಯ್ದಿರಿಸಿದ ಸುಪ್ರೀಂ

ನವದೆಹಲಿ ಮೇ 7 ಪಿಟಿಐ:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಜಾರಿ ನಿರ್ದೇಶನಾಲಯದ(ಇ.ಡಿ) ಪರ ಸಾಲಿಸಿಟರ್ ಜನರಲ್ ಎಸ್. ವಿ. ರಾಜು ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠ ಆದೇಶವನ್ನು ಕಾಯ್ದಿರಿಸಿದೆ.

‘ನಾಳೆ ಇಲ್ಲದಿದ್ದರೆ ಗುರುವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಬಹುದು. ಗುರುವಾರವಲ್ಲದಿದ್ದರೆ ಮುಂದಿನ ವಾರ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ‌ಪೀಠ ತಿಳಿಸಿದೆ.

ಕೇಜ್ರಿವಾಲ್ ಬಂಧನ ವಿರುದ್ಧದ ಅರ್ಜಿಯನ್ನು ಪೀಠವು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದು, ಪ್ರಮುಖ ಅರ್ಜಿಯು ಕೇಜ್ರಿವಾಲ್ ಬಂಧನವನ್ನು ಕಾನೂನುಬಾಹಿರ ಎಂದು ಹೇಳಿದರೆ, ಎರಡನೇ ಅರ್ಜಿಯು ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಜಾಮೀನು ನೀಡುವುದಕ್ಕೆ ಸಂಬಂಧಿಸಿದ್ದಾಗಿದೆ. ಏತನ್ಮಧ್ಯೆ, ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ದೆಹಲಿ ನ್ಯಾಯಾಲಯ ಮೇ 20ರವರೆಗೆ ವಿಸ್ತರಿಸಿದೆ.

ಲೋಕಸಭಾ ಚುನಾವಣೆ
ರಾಜ್ಯದಲ್ಲಿ 2ನೇ ಹಂತದ
ಮತದಾನ ಶೇ 70.03

ಬೆಂಗಳೂರು ಮೇ 7 ಅನುದಿನ:ಎರಡನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ರಾಜ್ಯದಲ್ಲಿ ಎರಡನೇ ಹಂತದಲ್ಲಿ ಶೇ 70.03ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಸಿಲಿನ ನಡುವೆಯೂ ಅನೇಕ ಕಡೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಕೆಲವೆಡೆ ನಿರೀಕ್ಷಿಸಿದಷ್ಟು ಮತದಾನ ನಡೆದಿಲ್ಲ. ಇದಕ್ಕೆ ಭಾರಿ ಬಿಸಿಲೇ ಕಾರಣ ಎನ್ನಲಾಗಿದೆ.ಕೆಲವೆಡೆ ಮತದಾನ ಬಹಿಷ್ಕಾರ ಹಾಗೂ ಸುರಪುರ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು ಬಿಟ್ಟರೇ ಚುನಾವಣೆ ಬಹುತೇಕ ಅಂತ್ಯವಾಗಿದೆ.

ಜಿಲ್ಲಾವಾರು ಮತದಾನ:ಚಿಕ್ಕೋಡಿ: 76.47,ಬೆಳಗಾವಿ: 71.00, ವಿಜಯಪುರ: 64.71, ಬಾಗಲಕೋಟೆ: 70.10,ಧಾರವಾಡ: 72.12, ಹಾವೇರಿ: 74.75, ದಾವಣಗೆರೆ: 76.23,ಶಿವಮೊಗ್ಗ: 76.05, ಉತ್ತರ ಕನ್ನಡ: 73.52, ಕೊಪ್ಪಳ: 69.87,ಬಳ್ಳಾರಿ: 72.35  ರಾಯಚೂರು: 61.81, ಕಲಬುರಗಿ: 61.73,ಬೀದರ್: 63.55

ಮೊದಲನೇ ಹಂತದ ಕ್ಷೇತ್ರಗಳ ವಿವರ: ಬೆಂಗಳೂರು ಸೆಂಟ್ರಲ್ ,ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ,ಬೆಂಗಳೂರುಗ್ರಾಮೀಣ, ಮಂಡ್ಯ,ಮೈಸೂರುಚಿಕ್ಕಬಳ್ಳಾಪುರಕೋಲಾರಹಾಸನ ತುಮಕೂರುಚಿತ್ರದುರ್ಗದಕ್ಷಿಣ ಕನ್ನಡ ಉಡುಪಿ– ಚಿಕ್ಕಮಗಳೂರುಚಾಮರಾಜನಗರ

ಸುರಪುರದಲ್ಲಿ
ಮತದಾನದ ವೇಳೆ ಘರ್ಷಣೆ

ಸುರಪುರ ಮೇ 7 ಅನುದಿನ:ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮಂಗಳವಾರ ಮತದಾನದ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಬಿಜೆಪಿ ಕಾರ್ಯಕರ್ತ ಭೀಮಣ್ಣ ಮಲ್ಲಪ್ಪ ಬ್ಯಾಳಿ ಎಂಬುವವರು ಗಾಯಗೊಂಡಿದ್ದಾರೆ.
ಘಟನೆ ವಿವರ: ಗುಳೆ ಕಾರ್ಮಿಕರನ್ನು ಎರಡೂ ಪಕ್ಷದವರು ತಲಾ ಮೂರು ಬಸ್‍ಗಳಲ್ಲಿ ಕರೆ ತಂದಿದ್ದರು. ಮೊದಲು ಬಿಜೆಪಿ ಪಕ್ಷದವರು ಕರೆ ತಂದ ಗುಳೆ ಕಾರ್ಮಿಕರು ಮತದಾನ ಮಾಡಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಕರೆ ತಂದಿದ್ದ ಕಾರ್ಮಿಕರು ಮತದಾನ ಮಾಡಲು ಬಂದ ಸಂದರ್ಭದಲ್ಲಿಯೇ ಬಿಜೆಪಿ ಕಾರ್ಯಕರ್ತರು ಬಂದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದಾಗ ಇದರಲ್ಲಿ ನಮ್ಮ ನೆಂಟರು ಇದ್ದಾರೆ. ಭೇಟಿ ಆಗುತ್ತೇವೆ ಎಂದರು. ಮತದಾನ ಮಾಡಿದ ಮೇಲೆ ಭೇಟಿ ಆಗಿ ಎಂದು ಕಾಂಗ್ರೆಸ್ ಕಾರ್ಯಕರ್ತರು ತಡೆದರು.

ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕಲ್ಲು ತೂರಾಟ ನಡೆಯಿತು. ಗಂಭೀರ ಗಾಯಗೊಂಡ ಭೀಮಣ್ಣ ಬ್ಯಾಳಿ ಅವರನ್ನು ಸುರಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.ಸುರಪುರ ನಗರದಿಂದ ಬಾದ್ಯಾಪುರವು 8 ಕಿಮೀ. ದೂರವಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಗುಳೆ ಕಾರ್ಮಿಕರ ಮತದಾರರು ಮತದಾನ ಮಾಡಲು ತೆರಳುವ ಸಂದರ್ಭದಲ್ಲಿ ಇನ್ನೊಂದು ಗುಂಪು ತಡೆದ ಪರಿಣಾಮ ಘಟನೆ ನಡೆದಿದೆ ಎಂದು ತಿಳಿಸಿರುವ ಪೊಲೀಸ್ ಇನ್‍ಸ್ಪೆಕ್ಟರ್ ಆನಂದ ವಾಗ್ಮೋಡೆ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಭೇಟಿ ನೀಡಿದ್ದರು.ಘಟನೆ ಮತಗಟ್ಟೆಯಿಂದ ದೂರದಲ್ಲಿ ನಡೆದಿದ್ದು, ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಚುನಾವಣಾಧಿಕಾರಿ ಕಾವ್ಯಾರಾಣಿ ತಿಳಿಸಿದರು.

ಪ್ರಜ್ವಲ್ ರೇವಣ್ಣ ಪತ್ತೆಗೆ
196 ರಾಷ್ಟ್ರಗಳಿಗೆ
ಇಂಟರ್ ಪೋಲ್ ಮಾಹಿತಿ

ಬೆಂಗಳೂರು ಮೇ 7 ಅನುದಿನ:ಲೈಂಗಿಕ ಹಗರಣ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಗಾಗಿ 196 ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ ರವಾನಿಸಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಇದೀಗ 196 ದೇಶಗಳಿಗೆ ಇಂಟರ್ ಪೋಲ್ ಮಾಹಿತಿ ರವಾನಿಸಿದೆ. ಈ ಕುರಿತು ವಿಶೇಷ ತನಿಖಾ ದಳಕ್ಕೆ ಇಂಟರ್ ಪೋಲ್ ಮಾಹಿತಿ ನೀಡಿದ್ದು, ಪ್ರಜ್ವಲ್ ರೇವಣ್ಣ ಪತ್ತೆಯಾದಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದೆ.
 
ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಬಗ್ಗೆ ವಿಶ್ವಾಸ ಇರಲಿ. ಎಸ್‌ಐಟಿ ಯಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಮೊದಲು ತನಿಖೆ ಆಗಿ ಸತ್ಯಾಂಶ ಹೊರಬರಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕೊಲೆ ಪ್ರಕರಣದ ಆರೋಪ
ಶಾಸಕ ವಿನಯ ಕುಲಕರ್ಣಿಗೆ
ಹೈಕೋರ್ಟ್‌ ಮತದಾನಕ್ಕೆ ಅನುಮತಿ

ಧಾರವಾಡ ಮೇ 7 ಅನುದಿನ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ ಧಾರವಾಡಕ್ಕೆ ಪ್ರವೇಶಿಸಿ ಮತ ಚಲಾಯಿಸಿದರು.
ನಗರದ ಸಪ್ತಾಪುರದ ಶಾರದಾ ಪದವಿಪೂರ್ವ ವಿದ್ಯಾಲಯದ ಮತಗಟ್ಟೆ 75ರಲ್ಲಿ ಅವರು ಮತ ಚಲಾಯಿಸಿದರು. ಸಂಜೆ 5.40ರ ಹೊತ್ತಿಗೆ ಬಂದು ಮತ ಹಾಕಿದರು. ಮತ ಚಲಾಯಿಸಿದ ನಂತರ ವಾಪಸ್‌ ತೆರಳಿದರು. ಪತ್ನಿ ಶಿವಲೀಲಾ ಮತ್ತು ಪುತ್ರ ವೈಶಾಲಿ ಮತದಾನ ಕೇಂದ್ರಕ್ಕೆ ಬಂದಿದ್ಚರು.

ಶಾರದಾ ವಿದ್ಯಾಲಯದ ಮುಂಭಾಗದ ರಸ್ತೆಯಲ್ಲಿ ವಿನಯ ಕುಲಕರ್ಣಿ ಅಭಿಮಾನಿಗಳು ಜಮಾಯಿಸಿದ್ದರು. ಹಲವರು ವಿನಯ ಅವರಿಗೆ ಹೂವಿನ ಹಾರ ಹಾಕಿದರು. ಜೈಕಾರ ಕೂಗಿದರು.

ಶಾರದಾ ವಿದ್ಯಾಲಯದ ಆವರಣ ಪ್ರವೇಶ ದ್ವಾರದಲ್ಲಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಅಭಿಮಾನಿಗಳು ಮತದಾನ ಕೇಂದ್ರ ಆವರಣಕ್ಕೆ ಭಾಗಕ್ಕೆ ಪ್ರವೇಶಿಸದಂತೆ ಪೊಲಿಸರು ನಿಗಾ ವಹಿಸಿದ್ದರು. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ ಸ್ಥಳದಲ್ಲಿಇದ್ದರು.

ಶಾಸಕ ವಿನಯ ಕುಲಕರ್ಣಿ ಅವರು ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ವಿನಯ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಇದೆ.

‘ಮತದಾನಕ್ಕೆ ಅವಕಾಶ–ಸಂತಸ’:‘ಹೈಕೋರ್ಟ್‌ ನನಗೆ ಮತದಾನದ ಹಕ್ಕು ಚಲಾಯಿಸಲು ಅವಕಾಶ ನೀಡಿದ್ದಕ್ಕೆ ಮತ್ತು ನಾಲ್ಕು ವರ್ಷಗಳ ನಂತರ ಧಾರವಾಡಕ್ಕೆ ಬಂದಿದ್ದು ಸಂತೋಷವಾಗಿದೆ’ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘2023ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡಕ್ಕೆ ಬಂದು ನನ್ನ ನಾಮಪತ್ರ ಸಲ್ಲಿಸಲೂ, ಮತ ಚಲಾಯಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಚುನಾವಣೆಯಲ್ಲಿ ಮತ ಚಲಾವಣೆಗೆ ಅವಕಾಶ ಸಿಕ್ಕಿದೆ. 25 ವರ್ಷದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಭಾಗದ ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ಧಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‘ಕೋರ್ಟ್‌ ಯಾವುದೇ ಷರತ್ತು ವಿಧಿಸಿಲ್ಲ. ಮತ ಹಾಕಿ ವಾಪಸಾಗುವಂತೆ ಆದೇಶಿಸಿದೆ’ ಎಂದು ಉತ್ತರಿಸಿದರು.

ಒಂದೇ ಕುಟುಂಬದ
96 ಸದಸ್ಯರಿಂದ ಮತದಾನ!!!

ಹುಬ್ಬಳ್ಳಿ ಮೇ 7 ಅನುದಿನ:ಒಂದೇ ಕುಟುಂಬದ ತೊಂಬತ್ತಾರು ಸದಸ್ಯರು ಜೊತೆಯಾಗಿ ಮತದಾನದ ಹಕ್ಕನ್ನು ಚಲಾಯಿಸಿದಅಪರೂಪದ ಸಂನ್ನಿವೇಶ ನಡೆದಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನನೋಲ್ವಿ ಗ್ರಾಮದ ಕೊಪ್ಪದ ಕುಟುಂಬಸ 96 ಮಂದಿ ಜೊತೆಯಾಗಿ ಮತದಾನ ಮಾಡಿದರು. 56, 57 ಮತಗಟ್ಟೆಗಳಲ್ಲಿ ಕುಟುಂಬಸ್ಥರು ಮತದಾನ ಮಾಡಿದರು.

ಕುಟುಂಬಸ್ಥರೆಲ್ಲರೂ ಏಕಕಾಲಕ್ಕೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು. ಕುಟುಂಬದ ಹಿರಿಯರಾದ ಕಂಟೆಪ್ಪ ಕೊಪ್ಪದ, ಸಹದೇವಪ್ಪ ಕೊಪ್ಪದ, ಫಕೀರವ ಕೊಪ್ಪದ ಸೇರದಂತೆ 96 ಜನ ಏಕಕಾಲಕ್ಕೆ ಮತದಾನ ಮಾಡಿದರು.ಇದೇ ರೀತಿ 3 ವಿಧಾನಸಭೆ, 2 ಲೋಕಸಭಾ ಚುನಾವಣೆಗೆ ಬರುತ್ತಿದ್ದೇವೆ.  ಕುಟುಂಬದಲ್ಲಿ ಮೂರು ಜನ ಯುವ ಮತದಾರರು ಇದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ

ಬಳ್ಳಾರಿ
ಶಾಂತಿಯುತ ಮತದಾನ
ಶೇ.73.59 ರಷ್ಟು ಮತದಾನ

ಬಳ್ಳಾರಿ ಮೇ 7 ಅನುದಿನ:ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 08 ವಿಧಾನಸಭಾ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಕ್ಷೇತ್ರಗಳ 1,972 ಮತಗಟ್ಟೆಗಳಲ್ಲಿ ಮೇ 07 ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಒಟ್ಟು ಶೇ.73.59 ರಷ್ಟು ಮತದಾನ ಪ್ರಮಾಣವಾಗಿದೆ.

ಬಳ್ಳಾರಿ ಗ್ರಾಮೀಣ - ಶೇ.72.08, ಬಳ್ಳಾರಿ ನಗರ - ಶೇ. 65.12, ಹೂವಿನಹಡಗಲಿ - ಶೇ.75.05, ಹಗರಿಬೊಮ್ಮನಹಳ್ಳಿ- ಶೇ.77.98, ಕಂಪ್ಲಿ - ಶೇ.78.91, ಕೂಡ್ಲಿಗಿ - ಶೇ.76.58, ಸಂಡೂರು - ಶೇ. 75.27, ವಿಜಯನಗರ - ಶೇ.70.33 ರಷ್ಟು ಮತದಾನವಾಗಿದೆ.

ಮತದಾನ ವಿವರ: ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,84,040 ಮತದಾರರಿದ್ದು, ಅದರಲ್ಲಿ 13,86,520 ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸಿದ್ದಾರೆ. 928857 ಪುರುಷ ಮತದಾರರಲ್ಲಿ 697349 ಪುರುಷರು (ಶೇ.75.08) ಮತ ಚಲಾಯಿಸಿದ್ದಾರೆ. 954914 ಮಹಿಳಾ ಮತದಾರರಲ್ಲಿ 689056 ಮಹಿಳೆಯರು (ಶೇ.72.16) ಮತದಾನ ಮಾಡಿದ್ದಾರೆ ಮತ್ತು 269 ಅಲ್ಪಸಂಖ್ಯಾತ ಮತದಾರರಲ್ಲಿ 115 ಮಂದಿ (ಶೇ.42.75) ಮತದಾನ ಮಾಡಿದ್ದಾರೆ.

ಜಿಲ್ಲೆಯಲ್ಲಿನ ಬಿರು ಬಿಸಿಲಿನ ತಾಪದ ಅರಿವಿದ್ದ ಮತದಾರರು ಮುಂಜಾನೆಯ ತಂಪು ಹೊತ್ತಿನಲ್ಲಿಯೇ ಹೋಗಿ ಮತ ಚಲಾಯಿಸಿಬಿಡೋಣ ಎಂಬ ಧಾವಂತದಲ್ಲಿ ಇದ್ದಿದ್ದು ಕಂಡುಬಂದಿತು.  ಹೀಗಾಗಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ, ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡುಬಂದಿತು.  ಚುನಾವಣಾ ಆಯೋಗದ ನಿಯಮದಂತೆ ಬೆಳಿಗ್ಗೆ 07 ಗಂಟೆಗೆ ಜಿಲ್ಲೆಯಾದ್ಯಂತ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಬಿರುಸಿನಿಂದ ಜರುಗಿತು. ಸೂರ್ಯ ನೆತ್ತಿಯ ಮೇಲೆ ಏರುತ್ತಿದ್ದಂತೆಯೇ ಮಧ್ಯಾಹ್ನದ ವೇಳೆಗೆ ಸ್ವಲ್ಪ ಮಂದಗತಿಯಲ್ಲಿ ಸಾಗಿದ ಮತದಾನ, ನಂತರ ಸಂಜೆ ವೇಳೆಗೆ ಇನ್ನಷ್ಟು ಬಿರುಸಿನಿಂದ ಸಾಗಿತು. ಮತದಾರರನ್ನು ಆಕರ್ಷಿಸಲು ಬಳ್ಳಾರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜಿಲ್ಲಾಡಳಿತದಿಂದ ವಿಭಿನ್ನ ಪರಿಕಲ್ಪನೆಯ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಕಲಚೇತನ ಮತಗಟ್ಟೆ, ಸಾಂಪ್ರದಾಯಿಕ ಮತ್ತು ವಿಷಯಾಧಾರಿತ ಮತಗಟ್ಟೆಗಳು ಆಕರ್ಷಕವಾಗಿದ್ದು, ಮತದಾರರನ್ನು ತನ್ನತ್ತ ಸೆಳೆಯುತ್ತಿದ್ದಂತೆ ಕಂಡುಬಂದಿತು.  

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1,219 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಕಂಪ್ಲಿ-242, ಸಿರುಗುಪ್ಪ-228, ಬಳ್ಳಾರಿ ಗ್ರಾಮೀಣ-235, ಬಳ್ಳಾರಿ ನಗರ-261 ಹಾಗೂ ಸಂಡೂರು ಕ್ಷೇತ್ರದ 253 ಮತಗಟ್ಟೆಗಳಲ್ಲಿ ಮತದಾನವು ಬಹುತೇಕ ಸುಸೂತ್ರ ಹಾಗೂ ಶಾಂತಿಯುತವಾಗಿ ನಡೆಯಿತು.

ಕಳೆದ ಬಾರಿ 2019 ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗೆಯ ಹಡಗಲಿ ಕ್ಷೇತ್ರದಲ್ಲಿ ಶೇ.71.45, ಹಗರಿಬೊಮ್ಮನಹಳ್ಳಿ ಕ್ಷೇತ್ರ-ಶೇ.73.37, ವಿಜಯನಗರ-ಶೇ.68.59, ಕಂಪ್ಲಿ-ಶೇ.70.72, ಬಳ್ಳಾರಿ ಗ್ರಾಮೀಣ-ಶೇ.70.12, ಬಳ್ಳಾರಿ ನಗರ-ಶೇ.63.05, ಸಂಡೂರು-ಶೇ.71.16 ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.22 ರಷ್ಟು ಅಂದರೆ ಒಟ್ಟಾರೆ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಶೇ.69.59 ರಷ್ಟು ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.  ಅಲ್ಲದೆ ಈ ಹಿಂದಿನ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗಳನ್ನು ಅವಲೋಕಿಸಿದಾಗ 2019 ರಲ್ಲಿ ಶೇ. 69.59, 2014 (ಉಪಚುನಾವಣೆ)- ಶೇ. 61.12, 2014- ಶೇ. 69.53 ಹಾಗೂ 2009 ರ ಚುನಾವಣೆಯಲ್ಲಿ ಶೇ. 61.43 ರಷ್ಟು ಮತದಾನವಾಗಿರುವುದು ದಾಖಲಾಗಿದೆ.

.........................................

ANUDINA Kannada News Website.
for latest news and reports, insightful analyses,
on politics, policy, governance,
Founder /Editor-in-Chief:Ganesh Inamdar.Journalist.Karnataka.
Founded-JUL/1/2016.Contacts: 9886667478
E-mail: ptiganesh.bly@gmail.com 

Today, there have been 11 visitors (12 hits) on this page!

This website was created for free with Own-Free-Website.com. Would you also like to have your own website?
Sign up for free